ಕ್ಯಾಂಡಿ	

ಶ್ರೀಲಂಕಾ ಗಣರಾಜ್ಯದ ಒಂದು ಪಟ್ಟಣ. ಮಧ್ಯ ಪ್ರಾಂತ್ಯ ಮತ್ತು ಕ್ಯಾಂಡಿ ಜಿಲ್ಲೆ-ಇವುಗಳ ಆಡಳಿತಕೇಂದ್ರ. ಶ್ರೀಲಂಕಾ ದ್ವೀಪದ ಮಧ್ಯ ಬಿಂದುವಿನ ಬಳಿ, ಕ್ಯಾಂಡಿ ಪ್ರಸ್ಥಭೂಮಿಯ ಮೇಲಿದೆ. ಇದರ ಎತ್ತರ ಸಮುದ್ರಮಟ್ಟದಿಂದ 1,602'. ಕೊಲಂಬೋದ ಈಶಾನ್ಯಕ್ಕೆ ರೈಲುಮಾರ್ಗದಲ್ಲಿ 75 ಮೈ.ದೂರದಲ್ಲಿರುವ ಕ್ಯಾಂಡಿಯ ಜನಸಂಖ್ಯೆ 68,202 (1963).

ಸುಂದರವಾದ ಗಿರಿವನಗಳ ನಡುವೆ ನೆಲೆಸಿರುವ ಕ್ಯಾಂಡಿ ಪಟ್ಟಣದ ನಡುವೆ ರಮ್ಯವಾದ ಸರೋವರವೊಂದಿದೆ. ಕ್ಯಾಂಡಿಯಲ್ಲಿ ಆಳುತ್ತಿದ್ದ ಕೊನೆಯ ದೊರೆ ಶ್ರೀವಿಕ್ರಮ ರಾಜಸಿಂಘೆ ಇದನ್ನು 1806ರಲ್ಲಿ ಕಟ್ಟಿಸಿದ. ಕ್ಯಾಂಡಿ ಸು.1480ರಿಂದಲೂ ಈ ಹೆಸರಿನ ರಾಜ್ಯದ ರಾಜಧಾನಿಯಾಗಿತ್ತು. 16ನೆಯ ಶತಮಾನದಲ್ಲಿ ಪೋರ್ಚುಗೀಸರೂ 1763ರಲ್ಲಿ ಡಚ್ಚರೂ ಇದನ್ನು ಸ್ವಲ್ಪಕಾಲ ಆಕ್ರಮಿಸಿಕೊಂಡಿದ್ದರಾದರೂ 1815ರಲ್ಲಿ ಇದು ಬ್ರಿಟಿಷರ ವಶವಾಗುವವರೆಗೂ ಇಲ್ಲಿಯ ದೊರೆಗಳು ಸಾಮಾನ್ಯವಾಗಿ ತಮ್ಮ ಸ್ವಾತಂತ್ರ್ಯವನ್ನುಳಿಸಿಕೊಂಡಿದ್ದರು.

	ಕ್ಯಾಂಡಿಯಲ್ಲಿ ಅನೇಕ ದೇವಸ್ಥಾನಗಳಿವೆ. ಇವುಗಳ ಪೈಕಿ ಬುದ್ಧನ ಪವಿತ್ರ ಹಲ್ಲನ್ನಿಟ್ಟಿರುವ ದೇವಸ್ಥಾನ ಹಳೆಯದು. ಇಲ್ಲಿ ವರ್ಷಕ್ಕೊಮ್ಮೆ ಒಂದು ಉತ್ಸವ ನಡೆಯುತ್ತದೆ. ಕ್ಯಾಂಡಿಗೆ 3 ಮೈ. ದೂರದಲ್ಲಿರುವ ಪೆರಡೆನಿಯದಲ್ಲಿ ಸಸ್ಯಶಾಸ್ತ್ರಕ ಉದ್ಯಾನವೂ ಸಿಲೋನ್ ವಿಶ್ವವಿದ್ಯಾಲಯದ ಒಂದು ಭಾಗವೂ ಇದೆ. ಅದಕ್ಕೆ ಹತ್ತಿರದಲ್ಲೆ ಎರಡು ಬೌದ್ಧ ದೇವಾಲಯಗಳುಂಟು.

	ಕ್ಯಾಂಡಿ ಜಿಲ್ಲೆಯ ವಿಸ್ತೀರ್ಣ 914 ಚ.ಮೈ. ಶ್ರೀಲಂಕಾದ ಚಹ ತೋಟಗಳಲ್ಲಿ ಬಹುಭಾಗ ಈ ಜಿಲ್ಲೆಯಲ್ಲಿದೆ. ಕ್ಯಾಂಡಿ ನಗರಕ್ಕೆ ಕೆಲವು ಮೈಲಿಗಳ ದೂರದಲ್ಲಿ ಹರಿಯುವ ಮಹಾವೇಲಿ ಗಂಗಾನದಿಯ ದಡದಲ್ಲಿ ಕಕಾವೊ ತೋಟಗಳುಂಟು. 	 (ಕೆ.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ